ಮನದ ಶಾಂತಿಗಾಗಿ ಒಂದು ಮಹತ್ತರವಾದ ಸಲಹೆ!

ಮನದ ಶಾಂತಿಗೆ ಒಂದು ಮಹತ್ತರವಾದ ಸಲಹೆ!

  • ಆರ್ಥಿಕವಾಗಿ ತನಗಿಂತ ಶ್ರೀಮಂತನಾಗಿರುವವನನ್ನು ನೋಡಿ ಮನುಷ್ಯನು ತನ್ನನ್ನು ತಾನೇ ವೇದನೆಗೆ ಒಳಪಡಿಸಿಕೊಳ್ಳುತ್ತಾನೆ. ಅವನ ಮೇಲೆ ಅಸೂಯೆಪಟ್ಟು ನಿಟ್ಟುಸಿರು ಬಿಡುತ್ತಾನೆ.
  • ತಮಗೆ ಬೇಕಾದ ಸೌಲಭ್ಯಗಳೊಂದಿಗೆ ಸ್ವಾವಲಂಬಿಯಾಗಿ ಬದುಕುತ್ತಿರುವ ಕುಟುಂಬಗಳಾದರೂ, ನೆರೆಹೊರೆಯವರ ಸೌಲಭ್ಯಗಳನ್ನು ನೋಡಿ "ಅವು ನಮ್ಮಲ್ಲಿ ಇಲ್ಲವಲ್ಲ" ಎಂದು ಹಂಬಲಿಸುತ್ತಾರೆ. ಆ ಹಂಬಲವು ಕಾಲಾನಂತರದಲ್ಲಿ ಪತಿಯನ್ನು ಪೀಡಿಸುವುದಕ್ಕೂ, ಜಗಳವಾಡುವುದಕ್ಕೂ ಮತ್ತು ಕುಟುಂಬ ಕಲಹಗಳಿಗೂ ಕಾರಣವಾಗುತ್ತದೆ. ಇದು ಪ್ರಾಮಾಣಿಕರನ್ನು ಕೂಡ ಲಂಚದಂತಹ ಪಾಪಗಳಲ್ಲಿ ತೊಡಗುವಂತೆ ಮಾಡುತ್ತದೆ.
  • ಒಬ್ಬ ದೇಶವನ್ನಾಳುವ ರಾಜನು ತನ್ನ ದೇಶಕ್ಕಿಂತ ಆರ್ಥಿಕವಾಗಿ ಸಮೃದ್ಧವಾಗಿರುವ ದೇಶವನ್ನು ನೋಡಿ ಅಸೂಯೆ ಪಡುತ್ತಾನೆ. ಇದರ ಅಂತಿಮ ಹಂತವು ಯುದ್ಧದಲ್ಲಿ ಕೊನೆಗೊಳ್ಳುತ್ತದೆ. ಲಕ್ಷಾಂತರ ಜೀವಗಳು ಬಲಿಯಾಗುತ್ತವೆ.
  • ಇದೇ ರೀತಿ ದೈಹಿಕ ರೂಪದಲ್ಲಿ ಒಬ್ಬನು ತನಗಿಂತ ಸುಂದರವಾದವರನ್ನು ಕಂಡಾಗ ಅವರ ಮೇಲೆ ಅಸೂಯೆ ಪಡುತ್ತಾನೆ. ಆ ಸೌಂದರ್ಯದ ಕಾರಣದಿಂದ ಅವರಿಗೆ ಸಿಗುವ ವಿಶೇಷತೆಗಳನ್ನು ನೋಡಿದಾಗ, ಇದು ಇನ್ನೂ ಹೆಚ್ಚಾಗಿ ಇವನ ಮನಸ್ಸಿನಲ್ಲಿ ಕೀಳರಿಮೆಯನ್ನು ಉಂಟುಮಾಡುತ್ತದೆ.
  • ಒಂದು ಕಣ್ಣನ್ನು ಕಳೆದುಕೊಂಡವರು ಎರಡು ಕಣ್ಣುಗಳಿರುವವರೊಂದಿಗೆ ತನ್ನನ್ನು ಹೋಲಿಕೆ ಮಾಡಿಕೊಳ್ಳುವುದರಿಂದ ತನಗೆ ಅನ್ಯಾಯವಾಗಿದೆ ಎಂದು ಭಾವಿಸಿ ದುಃಖಿಸುತ್ತಾರೆ.

ಹೀಗೆ ಜಗತ್ತಿನ ಹೆಚ್ಚಿನ ಮನೋವ್ಯಥೆಗಳಿಗೆ, ಗೊಂದಲಗಳಿಗೆ, ಕ್ರೌರ್ಯಗಳಿಗೆ ಮತ್ತು ಅಶಾಂತಿಗೆ ಈ 'ಹೋಲಿಕೆ'ಯೇ ಕಾರಣ. ಇಲ್ಲಿಯೇ ಮಾನವ ಮನೋವಿಜ್ಞಾನವನ್ನು ಬಲ್ಲ ಸರ್ವಶಕ್ತನಾದ ದೇವರು ಮಾನವ ಜೀವನಕ್ಕಾಗಿ ಪ್ರವಾದಿ (ಸಲ್ಲಲ್ಲಾಹು ಅಲೈಹಿ ವಸಲ್ಲಮ್) ಅವರ ಮೂಲಕ ಒಂದು ಅದ್ಭುತ ಮಾರ್ಗದರ್ಶನವನ್ನು ನೀಡಿದ್ದಾನೆ. ಮಾನವರಲ್ಲಿ ಮನೆಮಾಡಿರುವ ಈ 'ಕ್ಯಾನ್ಸರ್' ರೋಗಕ್ಕೆ ಒಂದು ಉತ್ತಮ ಮದ್ದನ್ನು ನೀಡಿದ್ದಾನೆ. ಆ ಮದ್ದು ಇದೇ:

"ಸಂಪತ್ತಿನಲ್ಲಿ ಮತ್ತು ದೈಹಿಕ ರೂಪದಲ್ಲಿ ನಿಮಗಿಂತ ಮೇಲಿರುವ ಒಬ್ಬರನ್ನು ನೀವು ಕಂಡರೆ, ತಕ್ಷಣವೇ (ಅವುಗಳಲ್ಲಿ) ನಿಮಗಿಂತ ಕೆಳಗಿರುವವರನ್ನು ನೋಡಿರಿ" ಎಂದು ಪ್ರವಾದಿ (ಸಲ್ಲಲ್ಲಾಹು ಅಲೈಹಿ ವಸಲ್ಲಮ್) ಅವರು ಹೇಳಿದ್ದಾರೆ. (ವರದಿಗಾರರು: ಅಬೂ ಹುರೈರಾ (ರಲಿ), ಗ್ರಂಥ: ಬುಖಾರಿ 6490).

ಹೌದು, ಕಾಲಿನಲ್ಲಿ ಚಪ್ಪಲಿ ಇಲ್ಲ ಎಂದು ವ್ಯಥೆಯಿಂದ ನಡೆದುಬರುವ ಒಬ್ಬ ವ್ಯಕ್ತಿ, ತನ್ನೆದುರು ಬರುತ್ತಿರುವ ವ್ಯಕ್ತಿಯು ಕಾಲೇ ಇಲ್ಲದೆ ಕುಂಟುತ್ತಾ ಸಂತೋಷವಾಗಿ ಸಾಗುತ್ತಿರುವುದನ್ನು ಕಂಡರೆ ಅವರ ಮನಸ್ಸಿಗೆ ಸಮಾಧಾನ ಸಿಗುವುದು ಖಚಿತ. ಇದೇ ರೀತಿ ಸೌಂದರ್ಯ, ಸಂಪತ್ತು, ಸೌಲಭ್ಯ, ಬುದ್ಧಿವಂತಿಕೆ ಹೀಗೆ ವಿವಿಧ ವಿಷಯಗಳಲ್ಲಿ ತಮ್ಮಲ್ಲಿರುವುದು ಕಡಿಮೆ ಎಂದು ಭಾವಿಸುವವರು, ತಮಗಿಂತ ಕಡಿಮೆ ಸೌಲಭ್ಯಗಳನ್ನು ಹೊಂದಿರುವವರನ್ನು ನೆನೆದರೆ ತಮ್ಮಲ್ಲಿರುವ ಬಗ್ಗೆ ಆತ್ಮತೃಪ್ತಿ ಹೊಂದಲು ಸಾಧ್ಯವಾಗುತ್ತದೆ. ಜನರು ಇದನ್ನು ಪ್ರಾಮಾಣಿಕವಾಗಿ ಅರಿತು ಕಾರ್ಯಪ್ರವೃತ್ತರಾದರೆ ವೈಯಕ್ತಿಕ ಮತ್ತು ಕೌಟುಂಬಿಕ ಜೀವನದಲ್ಲಿ ಶಾಂತಿ ಮರಳುತ್ತದೆ.

ಆದರೆ ಇದನ್ನು ಬಾಯಲ್ಲಿ ಹೇಳುವುದು ಮತ್ತು ಉಪದೇಶ ಮಾಡುವುದು ಸುಲಭ. ಆದರೆ ಪ್ರಾಯೋಗಿಕವಾಗಿ ಸಾಧ್ಯವೇ? ಹೌದು, ಸಾಧ್ಯವೇ! ... ಈ ಜೀವನದ ಉದ್ದೇಶವನ್ನು ಮತ್ತು ಸತ್ಯವನ್ನು ಅರಿತುಕೊಂಡವರಿಗೆ!

ಜೀವನವೆಂಬ ಪರೀಕ್ಷೆ!

ಈ ಬ್ರಹ್ಮಾಂಡದ ವಿಶಾಲತೆ, ಸೂಕ್ಷ್ಮತೆ ಮತ್ತು ಅದರ ದೋಷರಹಿತ ಚಲನೆ ಹಾಗೂ ಅದರ ಹಿಂದಿರುವ ಶಕ್ತಿಯು ಸೃಷ್ಟಿಕರ್ತನ ಬಗ್ಗೆ ಮತ್ತು ಅವನ ಮಹಾನ್ ಯೋಜನೆಗಳ ಬಗ್ಗೆ ಸಾರುತ್ತಿರುವುದನ್ನು ನಾವು ಕಾಣುತ್ತೇವೆ. ಪವಿತ್ರ ಗ್ರಂಥದಲ್ಲಿ ದೇವರು ಹೇಳುತ್ತಾನೆ:

"ಖಂಡಿತವಾಗಿಯೂ ಆಕಾಶಗಳ ಮತ್ತು ಭೂಮಿಯ ಸೃಷ್ಟಿಯಲ್ಲಿ; ರಾತ್ರಿ ಮತ್ತು ಹಗಲುಗಳು ಒಂದಾದ ಮೇಲೊಂದರಂತೆ ಬರುವುದರಲ್ಲಿ; ಮನುಷ್ಯರಿಗೆ ಉಪಯುಕ್ತವಾದ ವಸ್ತುಗಳೊಂದಿಗೆ ಸಮುದ್ರದಲ್ಲಿ ಸಂಚರಿಸುವ ನೌಕೆಗಳಲ್ಲಿ; ಆಕಾಶದಿಂದ ದೇವರು ನೀರನ್ನು ಸುರಿಸುವುದರಲ್ಲಿ ಮತ್ತು ಅದರ ಮೂಲಕ ಸತ್ತ ಭೂಮಿಯನ್ನು ಜೀವಂತಗೊಳಿಸುವುದರಲ್ಲಿ ಹಾಗೂ ಅದರಲ್ಲಿ ಎಲ್ಲಾ ವಿಧದ ಜೀವಿಗಳನ್ನು ಹರಡಿರುವುದರಲ್ಲಿ; ಗಾಳಿಯನ್ನು ದಿಕ್ಕು ಬದಲಿಸಿ ಬೀಸುವಂತೆ ಮಾಡುವುದರಲ್ಲಿ; ಆಕಾಶ ಮತ್ತು ಭೂಮಿಯ ನಡುವೆ ನಿಯಂತ್ರಿಸಲ್ಪಟ್ಟಿರುವ ಮೋಡಗಳಲ್ಲಿ - ಆಲೋಚಿಸುವ ಜನರಿಗೆ ನಿದರ್ಶನಗಳಿವೆ." (2:164)

(ಅಲ್ಲಾಹ್ ಎಂದರೆ ಆರಾಧನೆಗೆ ಅರ್ಹನಾದ ಏಕೈಕ ದೇವರು ಎಂದರ್ಥ. ಅದನ್ನು ಕೇವಲ ಮುಸ್ಲಿಮರ ದೇವರು ಅಥವಾ ಅರಬ್ ದೇಶದ ದೇವರು ಎಂದು ಭಾವಿಸಬೇಡಿ). ಹೀಗೆ ಈ ಇಡೀ ಬ್ರಹ್ಮಾಂಡವೇ ನಮಗಾಗಿ ಕಾರ್ಯನಿರ್ವಹಿಸುತ್ತಿರುವಾಗ ನಾವು ವ್ಯರ್ಥವಾಗಿ ಸೃಷ್ಟಿಸಲ್ಪಟ್ಟಿದ್ದೇವೆಯೇ? ದೇವರು ಕೇಳುತ್ತಾನೆ ನೋಡಿ:

''ನಾವು ನಿಮ್ಮನ್ನು ವ್ಯರ್ಥವಾಗಿ ಸೃಷ್ಟಿಸಿದ್ದೇವೆಂದು ಮತ್ತು ನೀವು ನಮ್ಮ ಬಳಿಗೆ ಮರಳಿ ಬರಲಾರಿರಿ ಎಂದು ತಿಳಿದುಕೊಂಡಿದ್ದೀರಾ?'' (23:115)

ದೇವರ ಪ್ರಶ್ನೆಗೆ ಉತ್ತರವನ್ನು ಆಲೋಚಿಸಿದಾಗ, ಪ್ರವಾದಿಗಳು ಮತ್ತು ದೈವಿಕ ಗ್ರಂಥಗಳು ನಮಗೆ ತಿಳಿಸಿಕೊಟ್ಟಿರುವುದು ಸತ್ಯವೆಂದು ಅರಿವಾಗುತ್ತದೆ. ಆ ಸತ್ಯವೇನೆಂದರೆ, ಈ ಲೋಕವನ್ನು ದೇವರು ಒಂದು ಪರೀಕ್ಷಾ ಕೇಂದ್ರವಾಗಿ ಸೃಷ್ಟಿಸಿದ್ದಾನೆ ಎಂಬುದು. ಈ ಪರೀಕ್ಷಾ ಕೇಂದ್ರಕ್ಕೆ ನಾವೆಲ್ಲರೂ ನಮಗೆ ನಿಗದಿಯಾದ ಸಮಯದಲ್ಲಿ ಬಂದು ಹೋಗುತ್ತಿದ್ದೇವೆ. ಇಲ್ಲಿ ದೇವರ ಆಜ್ಞೆಗಳಿಗೆ ಒಳಪಟ್ಟು ಮಾಡುವ ಕೆಲಸಗಳು ಪುಣ್ಯಗಳಾಗಿ ಮತ್ತು ಆಜ್ಞೆಗಳನ್ನು ಮೀರಿ ಮಾಡುವ ಕೆಲಸಗಳು ಪಾಪಗಳಾಗಿ ದಾಖಲಾಗುತ್ತವೆ. ಹೀಗೆ ಪ್ರತಿಯೊಬ್ಬರಿಗೂ ಪುಣ್ಯ ಅಥವಾ ಪಾಪಗಳನ್ನು ಮಾಡಲು ಸ್ವಾತಂತ್ರ್ಯ ಮತ್ತು ಅವಕಾಶವನ್ನು ನೀಡಲಾದ ಸ್ಥಳವೇ ಈ ತಾತ್ಕಾಲಿಕ ಪರೀಕ್ಷಾ ಕೇಂದ್ರ!

"ನಿಮ್ಮಲ್ಲಿ ಯಾರು ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಾರೆ ಎಂದು ಪರೀಕ್ಷಿಸಲು ಅವನು ಜೀವನ ಮತ್ತು ಮರಣವನ್ನು ಸೃಷ್ಟಿಸಿದನು. ಮತ್ತು ಅವನು ಮಹಾ ಪರಾಕ್ರಮಿಯೂ, ಅತ್ಯಂತ ಕ್ಷಮಾಶೀಲನೂ ಆಗಿದ್ದಾನೆ." (67:2)

ಒಂದು ದಿನ ಈ ಪರೀಕ್ಷಾ ಕೇಂದ್ರವು ಮುಚ್ಚಲ್ಪಡುತ್ತದೆ. ಅಂದರೆ ದೇವರ ಆಜ್ಞೆ ಬಂದಾಗ ಈ ಲೋಕವು ಸಂಪೂರ್ಣವಾಗಿ ನಾಶವಾಗುತ್ತದೆ. ನಂತರ ಮತ್ತೆ ದೇವರ ಆಜ್ಞೆ ಬಂದಾಗ ವಿಚಾರಣೆಗಾಗಿ ಎಲ್ಲಾ ಮಾನವರನ್ನು ಪುನರುಜ್ಜೀವನಗೊಳಿಸಲಾಗುತ್ತದೆ. ಇದನ್ನು ಅಂತಿಮ ತೀರ್ಪಿನ ದಿನ ಎಂದು ಕರೆಯಲಾಗುತ್ತದೆ. ಅಂದು ಪುಣ್ಯವಂತರಿಗೆ ಸ್ವರ್ಗವು ಮತ್ತು ಪಾಪಿಗಳಿಗೆ ನರಕವು ನಿಗದಿಯಾಗಲಿದೆ.

ವಾಸ್ತವವಾಗಿ ನಾಳೆ ಪರಲೋಕದಲ್ಲಿ ನಮ್ಮ ಶಾಶ್ವತ ನೆಲೆ ಸ್ವರ್ಗವೋ ಅಥವಾ ನರಕವೋ ಎಂಬುದನ್ನು ತೀರ್ಮಾನಿಸಲು ಸ್ಥಾಪಿಸಲಾದ ತಾತ್ಕಾಲಿಕ ಪರೀಕ್ಷಾ ಕೇಂದ್ರವೇ ಈ ಲೋಕ ಎಂಬ ಮಹಾನ್ ಸತ್ಯವನ್ನು ಅರ್ಥಮಾಡಿಕೊಂಡರೆ, ಮೇಲೆ ತಿಳಿಸಿದ ಪ್ರವಾದಿ ವಚನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಸುಲಭ! ಅಂತಹ ಸತ್ಯವಿಶ್ವಾಸಿಗಳಿಗೆ ದೇವರು ನೀಡುವ ಸಲಹೆಗಳು ಇವೇ:

  • "ಅಲ್ಲದೆ ಯಾವುದರ ಮೂಲಕ ನಿಮ್ಮಲ್ಲಿ ಕೆಲವರನ್ನು ಕೆಲವರಿಗಿಂತ ದೇವರು ಶ್ರೇಷ್ಠಗೊಳಿಸಿದ್ದಾನೋ ಅದನ್ನು (ಪಡೆಯಬೇಕೆಂದು) ದುರಾಸೆ ಪಡಬೇಡಿರಿ..." (ಪವಿತ್ರ ಕುರ್ಆನ್ 4:32)

ಜೀವನದ ಪರೀಕ್ಷೆಗಾಗಿಯೇ ನಮಗೆ ಈ ಸ್ಥಿತಿ ಒದಗಿಬಂದಿದೆ ಎಂದು ಅರಿತಾಗ, ಕೆಳಮಟ್ಟದಲ್ಲಿ ಇರುವವರು ಅದಕ್ಕೆ ಬದಲಾಗಿ ಪರಲೋಕದಲ್ಲಿ ಸ್ವರ್ಗದ ಸುಖಗಳು ಕಾದಿವೆ ಎಂಬ ನಿರೀಕ್ಷೆಯಲ್ಲಿ ಸಂತೋಷಪಡುತ್ತಾರೆ. ಮೇಲ್ಮಟ್ಟದಲ್ಲಿ ಇರುವವರು ದೇವರ ಪ್ರೀತಿಗಾಗಿ ತಮಗಿರುವ ಸೌಲಭ್ಯಗಳನ್ನು ತಮಗಿಂತ ಕೆಳಗಿರುವವರೊಂದಿಗೆ ಹಂಚಿಕೊಳ್ಳಲು ಮುಂದಾಗುತ್ತಾರೆ.

"ಯಾರು (ಪರಲೋಕವನ್ನು ತ್ಯಜಿಸಿ) ಈ ಕ್ಷಣಿಕ ಜೀವನವನ್ನು ಬಯಸುತ್ತಾರೋ, ಅವರಲ್ಲಿ ನಾವು ಯಾರಿಗೆ ಇಷ್ಟಪಡುತ್ತೇವೋ ಅವರಿಗೆ ನಾವು ಬಯಸಿದ್ದನ್ನು (ಇಹಲೋಕದಲ್ಲೇ) ಶೀಘ್ರವಾಗಿ ನೀಡಿಬಿಡುತ್ತೇವೆ. ತದನಂತರ ಅವನಿಗಾಗಿ ನಾವು ನರಕವನ್ನು ಸಿದ್ಧಪಡಿಸಿದ್ದೇವೆ; ಅದರಲ್ಲಿ ಅವನು ನಿಂದಿತನಾಗಿ ಮತ್ತು ಶಾಪಗ್ರಸ್ತನಾಗಿ ಪ್ರವೇಶಿಸುವನು." (17:18)

"ಮತ್ತು ಯಾರು ಪರಲೋಕವನ್ನು ಬಯಸಿ ಅದಕ್ಕಾಗಿ ತಕ್ಕ ರೀತಿಯಲ್ಲಿ ಶ್ರಮಿಸುತ್ತಾರೋ ಹಾಗೂ ಅವರು ವಿಶ್ವಾಸಿಯೂ ಆಗಿದ್ದರೆ, ಅಂತಹವರ ಶ್ರಮವು (ದೇವರಿಂದ) ಸ್ವೀಕರಿಸಲ್ಪಡುತ್ತದೆ." (17:19)

"ಇಹಲೋಕವನ್ನು ಬಯಸುವವರಿಗೂ ಮತ್ತು ಪರಲೋಕವನ್ನು ಆಶಿಸುವವರಿಗೂ ನಿಮ್ಮ ದೇವನ ಕೊಡುಗೆಯಿಂದ ನಾವೇ ಸಹಾಯ ಮಾಡುತ್ತೇವೆ. ನಿಮ್ಮ ದೇವನ ಕೊಡುಗೆಯು (ಯಾರಿಗೂ) ತಡೆಹಿಡಿಯಲ್ಪಟ್ಟಿಲ್ಲ." (17:20)

"ನಾವು ಹೇಗೆ ಅವರಲ್ಲಿ ಕೆಲವರನ್ನು ಕೆಲವರಿಗಿಂತ (ಇಹಲೋಕದಲ್ಲಿ) ಶ್ರೇಷ್ಠಗೊಳಿಸಿದ್ದೇವೆ ಎಂಬುದನ್ನು ಗಮನಿಸಿರಿ! ಆದರೆ ಪರಲೋಕವು (ಜೀವನವು) ಪದವಿಗಳಲ್ಲಿ ಅತಿ ದೊಡ್ಡದಾಗಿದೆ ಮತ್ತು ಶ್ರೇಷ್ಠತೆಯಲ್ಲಿಯೂ ಅತಿ ದೊಡ್ಡದಾಗಿದೆ." (17:21)

 

Comments

Popular posts from this blog

ಅಲ್ಲಾಹ್ ಎಂದರೆ ಯಾರು ?

ಜೀವಕಾರುಣ್ಯವೇ ಬಕ್ರೀದ್ ಉತ್ಸವ!

ಕುರಾನ್ - ಕನ್ನಡ ಅನುವಾದ